ಕಿಂಕ್, ಹಾನ್ಸ್ ಅನ್ಸ್ರ್ಟ್

 1865-1926. ನಾರ್ವೆ ದೇಶದ ನಾಟಕಕಾರ ಮತ್ತು ಕಾದಂಬರಿಕಾರ, ಅಕ್ಟೋಬರ್ 11, 1865ರಲ್ಲಿ ಜನಿಸಿದ ಈತ ತನ್ನ ಬಾಲ್ಯದ ದಿನಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಕಳೆದ. ಅಲ್ಲಿನ ಜನಜೀವನದ ಬಗ್ಗೆ ಅದರಲ್ಲೂ ಬೇಸಾಯಗಾರರ ಬದುಕಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ, ಅವರ ಬದುಕನ್ನು ಹತ್ತಿರದಿಂದ ಕಂಡು ಅಭ್ಯಸಿಸಿದ. ಮುಂದೆ ಈತ ರಚಿಸಿದ ಕೃತಿಗಳಲ್ಲಿ ಪ್ರಾದೇಶಿಕ ಅನುಭವಗಳು ಚೆನ್ನಾಗಿ ಚಿತ್ರಿತವಾಗಿವೆ.

 ಇಟಲಿ ದೇಶಕ್ಕೆ ಹಲವು ಬಾರಿ ಭೇಟಿಕೊಟ್ಟಿದ್ದ ಕಿಂಕ್ ಇಟಲಿ ಸಾಹಿತ್ಯವನ್ನು ಅದರಲ್ಲೂ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನ ಕಾಲದಲ್ಲಿ ಆದ ಸಾಹಿತ್ಯ ಕ್ರಾಂತಿಯ ವಿಷಯವನ್ನು ವಿಶೇಷವಾಗಿ ಅಧ್ಯಯನ ಮಾಡಿದ. ಇದರಿಂದಾಗಿ ಹೊಸ ಬಗೆಯ ಸಾಹಿತ್ಯವನ್ನು ಸೃಷ್ಟಿಸುವ ಬಗ್ಗೆ ಇವನ ಮನಸ್ಸು ಕೆಲಸಮಾಡತೊಡಗಿತು.

 ಕವಿತಾಮಯವಾದ ಇವನ ಭಾವನೆಗಳಲ್ಲಿ ದಯೆ, ಕೋಮಲತೆ ಮತ್ತು ದಿವ್ಯತೆಗಳ ತ್ರಿವೇಣೀ ಸಂಗಮವನ್ನು ಗುರುತಿಸಬಹುದು. 

ಪ್ರಾರಂಭದಲ್ಲಿ ಇವನ  ಕೃತಿಗಳಿಗೆ ಒಳ್ಳೆಯ ಸ್ವಾಗತ ದೊರೆಯಲಿಲ್ಲವಾದರೂ ಕ್ರಮೇಣ ಅವಕ್ಕೆ ಸಲ್ಲಬೇಕಾದ ಮಾನ್ಯತೆ ಸಂದಿತು. ಇವನು ರಚಿಸಿದ ಅನೇಕ ಕೃತಿಗಳಲ್ಲಿ ಎಮಿಗ್ರಾಂಟ್ಸ್, ದಿ ಅವಲಾಂಚ್ ಫೆಲ್, ದಿ ಡ್ರೋವರ್ ಎಂಬುವು ಮುಖ್ಯವಾದುವು. ಇವನ ಸಣ್ಣ ಕತೆಗಳಲ್ಲಿ ಅನೇಕವು ಶಾಶ್ವತವಾಗಿ ಉಳಿಯಬಲ್ಲಂಥವಾಗಿವೆ.

 ಇವನದು ವರ್ಣಮಯ ಶೈಲಿ. ಇದರಿಂದಾಗಿ ಇವನ ಕೃತಿಗಳು ಅರ್ಥವಾಗುವುದು ಸ್ವಲ್ಪ ಕಷ್ಟ ಎಂದು ವಿಮರ್ಶಕರ ಅಭಿಪ್ರಾಯ. ಆದರೂ ಇವನ ವರ್ಣನೆಗಳಲ್ಲಿನ ಪ್ರಾದೇಶಿಕತೆ ಮತ್ತು ಆಡುಮಾತಿನ ಸೊಗಸು ಮೆಚ್ಚುವಂಥವು. 

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ